ಸಿ ಎಮ್ ಗೆ ಗಂಡಸ್ಥನದ ಸವಾಲ್ ಹಾಕಿದ ಎಚ್ ಡಿ ಕೆ…!

ರಾಮನಗರ: ರಾಜ್ಯದಲ್ಲಿ ಭುಗಿಲೆದ್ದಿರುವ ಹಲಾಲ್, ವ್ಯಾಪಾರದಲ್ಲೂ ಧರ್ಮ ಸಂಘರ್ಷ ಕುರಿತು ಸಿಎಂ ಬೊಮ್ಮಾಯಿ ಅವರ ಹೇಳಿಕೆ ವಿರುದ್ಧ ಕೆಂಡಮಂಡಲವಾದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹದ್ದನ್ನೆಲ್ಲ ಉತ್ತರ ಪ್ರದೇಶದಲ್ಲಿ ಇಟ್ಟುಕೊಳ್ಳಿ, ಶಾಂತಿಪ್ರಿಯ ನಾಡಲ್ಲಿ ಕೋಲಾಹಲ ಎಬ್ಬಿಸಬೇಡಿ ಎನುತ್ತಲೇ ಸಿಎಂ ಬಸವರಾಜ ಬೊಮ್ಮಾಯಿಗೆ ಗಂಡಸ್ತನದ ಸವಾಲ್ ಹಾಕಿದ್ದಾರೆ.

ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಎಚ್​ಡಿಕೆ, ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ.. ಬೊಮ್ಮಾಯಿ ಅವರೇ ನಿಮಗೆ ಗಂಡಸ್ತನ ಇದ್ರೆ ಮೊದಲು ಹಲಾಲ್- ವ್ಯಾಪಾರದಲ್ಲೂ ಧರ್ಮ ಸಂಘರ್ಷವನ್ನ ತಡೆಯಿರಿ. ಈ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದರೂ ತಮಗೆ ಏನೂ ಗೊತ್ತೇ ಇಲ್ಲಾ ಅನ್ನೊ ರೀತಿ ಇದ್ರೆ ಏನ್ ಅರ್ಥ? ನಾನು ಗಂಡಸ್ತನ ಪದವನ್ನ ಉಪಯೋಗ ಮಾಡಬಾರದು. ಆದರೆ ರಾಜ್ಯದಲ್ಲಿ ಆಗ್ತಿರುವ ಶಾಂತಿ ಕದಡುತ್ತಿರುವ ಬೆಳವಣಿಗೆ ಕಂಡು ತಡೆಯಲಾರದೆ ಈ ಪದ ಬಳಸಿದ್ದೇನೆ. ಸಮಾಜಘಾತಕ ಶಕ್ತಿಗಳು ಸಮಾಜ ಹೊಡೆಯುವ ಹ್ಯಾಂಡ್‌ ಬಿಲ್​ಗಳನ್ನ ಹಂಚಿಕೊಂಡು ಹೊರಟ್ಟಿದ್ದಾರೆ. ನೀವು ಯಾವ ಸಂವಿಧಾನವನ್ನು ಗೌರವಿಸುತ್ತಿದ್ದೀರಾ? ನನಗೆ ವೋಟು ಮುಖ್ಯವಲ್ಲಾ, ಈ ನಾಡು ಶಾಂತಿಯಿಂದ ಬದುಕಬೇಕು. ನಿಮ್ಮ ಕೇಸರಿ ಬಟ್ಟೆ ಹಾಕಿಕೊಂಡು ಹಳ್ಳಿ ಹಳ್ಳಿಯಲ್ಲಿ ವಿಷಬೀಜ ಬಿತ್ತಿ, ನಮ್ಮ ಜನ್ರ ಬದುಕನ್ನ ಹಾಳು ಮಾಡುತ್ತಿದ್ದರೆ ನಾನು ಮೌನವಾಗಿ ಇರಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು.

ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗದಳ ಮುಖಂಡರಿಗೆ ರೈತರ ಬದುಕು ಗೊತ್ತಿದೆಯಾ? ನಮ್ಮ ರೈತರು ಕತ್ತರಿಸುವ ಮಾಂಸ ಕ್ಲೀನ್ ಮಾಡಲು ಆ ಸಮಾಜದವರೇ ಬರಬೇಕು. ಈಗ ಹಲಾಲ್- ಜಟ್ಕಾ ಕಟ್ ಅಂತಿದ್ದೀರಲ್ಲ ನೀವು… ನಿಮ್ಮ ಜಟ್ಕಾ ಮಾಡೋಕು, ಇನ್ನೊಂದು ಮಾಡೋಕು ಅವರೇ ಬೇಕು. ರೇಷ್ಮೆ, ಮಾವು, ದ್ರಾಕ್ಷಿ ಬೆಳೆ ಖರೀದಿಗೂ ಅವರೇ ಬರಬೇಕು. ಇಷ್ಟು ವರ್ಷ ಹಲಾಲ್ ತಿಂದಿದ್ದೇವೆ, ಏನಾಗಿದೆ? ಚೆನ್ನಾಗಿದ್ದೀವಲ್ಲಾ.. ಹಲವಾರು ವರ್ಷಗಳಿಂದ ಹಲಾಲ್ ನಡೆಯುತ್ತಿದೆ, ಈಗಿನದ್ದಲ್ಲ. ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ ಜನ ಸತ್ತರೂ ಬಿಜೆಪಿ ಸರ್ಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲು ಅಗಲಿಲ್ಲ. ಆಗ ಎಲ್ಲಿದ್ದರೂ ವಿಶ್ವ ಹಿಂದೂ ಪರಿಷತ್ – ಭಜರಂಗ ದಳದವರು? ಕಾಂಗ್ರೆಸ್​ನವರಿಗೆ ಮಾತನಾಡಲು ತಾಕತ್ತಿಲ್ಲ. ಹಿಂದೂಗಳು ವೋಟ್ ಹಾಕ್ತಾರೋ? ಇಲ್ಲವೋ? ಎಂಬ ಭಯ. ಉತ್ತರಪ್ರದೇಶದಲ್ಲಿ ನಿಮ್ಮ ಆಟ ಆಡಿಕೊಳ್ಳಿ, ಇಲ್ಲಿ ಬೇಡ ಎಂದು ಕುಮಾರಸ್ವಾಮಿ ಕಿಡಿಕಾರಿದರು.