ಹುಬ್ಬಳ್ಳಿ : ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಒಂದೆರಡು ರಾಷ್ಟಗಳು ಮುಚ್ಚಿ ಹೋಗಲಿವೆ. ಜನರ ಅಕಾಲ ಮೃತ್ಯು ಆಗುವ ಸೂಚನೆ ಇದೆ. ವಿಜಯದಶಮಿಯಿಂದ ಸಂಕ್ರಾಂತಿವರೆಗೆ ಜಗತ್ತಿನಲ್ಲಿ ದುರ್ಘಟನೆ ನಡೆಯುತ್ತದೆ. ಆಳುವವರು ಅರಿತರೆ ಗಂಡಾತರದಿಂದ ಪಾರಾಗಬಹುದು ಇಲ್ಲಾ ಕಟ್ಟಿಟ್ಟ ಬುತ್ತಿ ಎಂದು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿಗಳು ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಒಂದು ಸರ್ಕಾರ ಬರುತ್ತದೆ. ಸ್ಥಿರ ಸರ್ಕಾರ ಇರುತ್ತದೆ ಅಂತ ಹೇಳಿದ್ದೆ ಅದು ನಿಜ ಆಗಿದೆ. ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತದೆ ಜಲಪ್ರಳಯ ಆಗುವ ಲಕ್ಷಣ ಇದೆ ಎಂದರು.
ಕರುನಾಡಿಗೆ ಕೆಲವೊಂದು ಆಪತ್ತು ಇದೆ. ಕೆಲವು ಸಾವು ನೋವುಗಳು ಆಗುತ್ತವೆ. ದೈವ ಕೃಪೆಯಿಂದ ಪಾರಾಗಬಹುದು. ಭಾರತದಲ್ಲಿ ನಾನು ಹೇಳಿದಂತೆ ಒಂದು ಘಟನೆ ಆಗುತ್ತದೆ. ತಪ್ಪಿಸುವಂತದ್ದು, ಆಳುವವರ ಕೈಯಲ್ಲಿದೆ. ಜಗತ್ತಿನ ಸಾಮ್ರಾಟರು ತಲ್ಲಣ ಆಗುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಬಡವರಿಗೆ ಗ್ಯಾರಂಟಿ ವಿಚಾರವಾಗಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಒಳ್ಳೆಯದೇ. ಯಾವ ಹೆಣ್ಣಿಗೆ ಸ್ವಾತಂತ್ರ ಇರಲಿಲ್ಲ. ಅಂತಹ ಹೆಣ್ಣು ಈಗ ಸ್ವತಂತ್ರವಾಗಿ ಹೊರಗಡೆ ಬಂದಿದ್ದಾರೆ ಎಂದು ಅವರು ಸಿದ್ಧರಾಮಯ್ಯನವರ ಸರ್ಕಾರದ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.