ಬೆಂಗಳೂರು, ಜುಲೈ 03: ಏಷ್ಯನ್ ಮೆಡಲಿಸ್ಟ್ ಬಿಂದು ರಾಣಿ ಅವರ ಮೇಲೆ ಸೀನಿಯರ್ ಕೋಚ್ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ. ಇಂದು ಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ಸೀನಿಯರ್ ಕೋಚ್ ಯತೀಶ್ ಎನ್ನುವವರ ಪತ್ನಿ ಕೋಚ್ ಶ್ವೇತಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಿಂದು ರಾಣಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಕಂಠೀರವ ಸ್ಟೇಡಿಯಂನಲ್ಲಿ ಟೆಡ್ ಎಕ್ಸ್ ಇನ್ಸ್ ಫಿರೇಷನಲ್ ಶೋ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಶೋನಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ವಿರಾಟ್ ಕೊಹ್ಲಿ ಸೇರಿದಂತೆ ದೊಡ್ಡ ದೊಡ್ಡ ಸೆಲಬ್ರೆಟಿಗಳು ಭಾಗಿಯಾಗಿದ್ದರು. ಜೊತೆಗೆ ಬಿಂದು ರಾಣಿಗೂ ಸಹ ಭಾಗಿಯಾಗುವ ಅವಕಾಶ ಸಿಕ್ಕಿತ್ತು. ಆದರೆ ಬಿಂದು ರಾಣಿ ಕಾರ್ಯಕ್ರಮದಲ್ಲಿ ತಪ್ಪು ಮಾಹಿತಿ ಕೊಟ್ಟು ಅವಕಾಶ ಗಿಟ್ಟಿಸಿರುವುದಾಗಿ ನಿಂದಿಸಿ ಸೀನಿಯರ್ ಕೋಚ್ ಯತೀಶ್ ಪತ್ನಿ ಆರೋಪಿಸಿದ್ದಾರೆ.
ಸೀನಿಯರ್ ಕೋಚ್ ಯತೀಶ್ ಪತ್ನಿ ಬಿಂದು ರಾಣಿ ಅವರನ್ನು ನಿಂದಿಸಿ ಚಪ್ಪಲಿ ತೋರಿಸಿರುವ ವಿಡಿಯೋ ಸಾಮಾಜಿಕ ಜಾಲ ಎಲ್ಲೆಡೆ ವೈರಲ್ ಆಗುತ್ತಿದೆ. ಇಂದು ಬೆಳಗ್ಗೆ ಕ್ರೀಡಾಂಗಣಕ್ಕೆ ಬಿಂದು ರಾಣಿ ಬಂದಾಗ ಶ್ವೇತಾ ಏಕವಚನದಲ್ಲಿ ಮನಸೋಯಿಚ್ಛೆ ನಿಂದಿಸಿ ಜೋರಾಗಿ ಕೂಗಿ ವಾಗ್ದಾಳಿ ನಡೆಸಿದ್ದಾರೆ.
ಏನ್ ಮಾಡ್ತೀಯಾ? ನನಗೆ ಬೆದರಿಸ್ತಿಯಾ? ಫೋನ್ ಮಾಡಿಸ್ತೀಯಾ? ರೌಡಿಸಂ ಮಾಡ್ತೀಯಾ? ಬಂದಿದ್ದೀನಿ ಸ್ಟೇಡಿಯಂಗೆ ಏನ್ ಮಾಡ್ತೀಯಾ ಹೇಳಲೇ? ಯಾವ ಫ್ಲಾಟ್ ಫಾರಂನಲ್ಲಿ ಪ್ರಶ್ನೆ ಕೇಳಿದೀನಿ. ಅದೇ ಫ್ಲಾಟ್ ಫಾರಂನಲ್ಲಿ ಉತ್ತರ ಕೊಡಬೇಕು. ದೊಡ್ಡವರು ಇನ್ವಾಲ್ವ್ ಇದಾರಾ ? ಎಂದು ಶ್ವೇತಾ ಅವಾಜ್ ಹಾಕಿದ್ದಾರೆ.
ಏಯ್.. ಹೇಳೇ…? ಏನೇ ನಿಂದು ಫಾರ್ಪಾಮೆನ್ಸ್? ನಿಜ ಹೇಳು. ಸುಳ್ ಯಾಕೆ ಹೇಳ್ತಿದಿಯಾ ಎಲ್ಲರೂ ಕೇಳಲಿ. ಯಾಕೆ ಬಾಯಿ ಇಲ್ವಾ? ಎಲ್ಲಿ ಹೋಗ್ಬೇಕೋ ಅಲ್ಲಿಗೇ ಹೋಗುತ್ತೇವೆ. ಯಾಕೆ ಕರ್ನಾಟಕಕ್ಕೆ ಕೆಟ್ಟು ಹೆಸರು ತರ್ತಿದ್ದೀಯಾ? ನಿನಗೆ ಇಲ್ಲಿ ನಿಂತುಕೊಳ್ಳುವ ಯೋಗ್ಯತೆ ಏನು? ನಿನ್ನ ಸಾಧನೆ ಏನು? ನೀನು ಸೀನಿಯರ್‌ಗಳಿಗೆ ಮರ್ಯಾದೆ ಕೊಟ್ಟು ಉತ್ತರ ಕೊಡುತ್ತಿದ್ದೀಯಾ? ನೀನು ನಿಜವಾದ ಸಾಧಕಿ ಆಗಿದ್ರೆ ಕಂಠೀರವ ಕೋಚ್ ಗ್ರೂಪ್ ಅಲ್ಲಿ ಉತ್ತರ ಕೊಡ್ತಿದ್ದೆ ಎಂದು ಎಂದು ಜೋರಾಗಿ ಕೂಗಾಡಿದ್ದಾರೆ.