ನವದೆಹಲಿ: ಮದುವೆ ಪ್ರಸ್ತಾಪ ನಿರಾಕರಿಸಿದ್ದಕ್ಕೆ ಯುವತಿಯೊಬ್ಬರನ್ನು ಸಹೋದರ ಸಂಬಂಧಿಯೇ ಕೊಲೆ ಮಾಡಿದ್ದಾರೆ.
ಮೃತ ಯುವತಿಯನ್ನು ನರ್ಗೀಸ್ (25) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ಇರ್ಫಾನ್ ಶರಣಾಗಿದ್ದಾನೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪದವಿ ಮುಗಿಸಿದ್ದ ನರ್ಗೀಸ್ ಸ್ಟೆನೋಗ್ರಫಿ ತರಗತಿಗೆ ಹೋಗುತ್ತಿದ್ದರು. ಈ ನಡುವೆ ಇರ್ಫಾನ್ ಮದುವೆ ಪ್ರಸ್ತಾಪ ಮಾಡಿದ್ದ. ಫುಡ್ ಡೆಲಿವೆರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆತನಿಗೆ ಖಾಯಂ ಉದ್ಯೋಗವಿಲ್ಲದ ಕಾರಣ ನರ್ಗೀಸ್ ಮದುವೆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಇದರಿಂದ ಕುಪಿತಗೊಂಡು ಇರ್ಫಾನ್ ಕೊಲೆ ಮಾಡಿದ್ದಾನೆ ಎಂದು ನರ್ಗೀಸ್ ಕುಟುಂಬದವರು ಹೇಳಿದ್ದಾರೆ.
ಶುಕ್ರವಾರ ನರ್ಗೀಸ್ ಎಂದಿನಂತೆ ಸ್ಟೆನೋಗ್ರಫಿ ತರಗತಿಗೆ ಹೋಗುವಾಗ ದೆಹಲಿ ವಿಶ್ವವಿದ್ಯಾಲಯದ ಅರಬಿಂದೋ ಕಾಲೇಜು ಬಳಿಯ ಉದ್ಯಾನವನದಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ಕುರಿತು ತನಿಖೆ ಮುಂದುವರೆಸಿರುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ.