ಪಟ್ನಾ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುವ ಬಗ್ಗೆ ಮತ್ತು ವಿದೇಶದಲ್ಲಿ ಆಶ್ರಯವನ್ನು ಹುಡುಕುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಿಂತಿತರಾಗಿದ್ದಾರೆ ಎಂದು ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಟೀಕಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟದ ಕುರಿತು ಕೆಲವು ದಿನಗಳ ಹಿಂದೆ ಮೋದಿ ಅವರು ‘ಕ್ವಿಟ್ ಇಂಡಿಯಾ’ ಎಂದು ವ್ಯಂಗ್ಯವಾಡಿದ್ದರು.
ಅಲ್ಲದೆ, I.N.D.I.Aವನ್ನು ರಚಿಸಿರುವ ವಿರೋಧ ಪಕ್ಷಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದ ರಾಜಕೀಯವನ್ನು ಮಾಡುತ್ತಿವೆ ಎಂದು ಪ್ರಧಾನಿ ಆರೋಪಿಸಿದ್ದರು.
ಮೋದಿ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಲಾಲು ಪ್ರಸಾದ್, ‘ಮೋದಿ ಅವರು ಭಾರತವನ್ನು ಬಿಡಲು ಯೋಜಿಸುತ್ತಿದ್ದಾರೆ, ಇದೇ ಕಾರಣಕ್ಕಾಗಿ ಅವರು ಹಲವಾರು ದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರು ತಮ್ಮ ಮನ ತಣಿಸಲು ಮತ್ತು ಪಿಜ್ಜಾ, ಮೊಮೊಸ್ ಮತ್ತು ಚೌ ಮೀನ್‌ಅನ್ನು (ನ್ಯೂಡಲ್ಸ್ ಜೊತೆಗೆ ತರಕಾರಿಗಳು ಅಥವಾ ಮಾಂಸವನ್ನು ಒಳಗೊಂಡ ಚೀನಾ ಆಹಾರ) ಆನಂದಿಸಲು ಸ್ಥಳವನ್ನು ಹುಡುಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ಎಪ್ಪತ್ತರ ವಯಸ್ಸಿನ ಲಾಲು ಪ್ರಸಾದ್ ತಮ್ಮ ಹಿರಿಯ ಪುತ್ರ ಮತ್ತು ಬಿಹಾರದ ಸಚಿವ ತೇಜ್ ಪ್ರತಾಪ್ ಯಾದವ್ ಆಯೋಜಿಸಿದ್ದ ಸಮಾರಂಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.
ಮುಂದಿನ ತಿಂಗಳು ಮುಂಬೈನಲ್ಲಿ ನಡೆಯಲಿರುವ I.N.D.I.Aದ ಮುಂದಿನ ಸಭೆಯನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಪ್ರಸಾದ್ ಹೇಳಿದರು.
‘ನಾವು ಒಗ್ಗಟ್ಟನ್ನು ಉಳಿಸಿಕೊಳ್ಳಬೇಕು ಮತ್ತು ಬಿಜೆಪಿಯನ್ನು ಸೋಲಿಸಬೇಕು. ನರೇಂದ್ರ ಮೋದಿ ಅವರು ಸಂವಿಧಾನವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ನಾವು ಆ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ’ ಎಂದು ಲಾಲು ಪ್ರಸಾದ್ ತಿಳಿಸಿದರು.
ಮಣಿಪುರದಲ್ಲಿ ನಡೆಯುತ್ತಿರುವ ಕಲಹಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಪ್ರಸಾದ್ ಆರೋಪಿಸಿದರು.