ಹೈದರಾಬಾದ್: ದೇವರ ಚಿತ್ರಗಳನ್ನು ತೋರಿಸಿ ಜನರ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಜನರು ಪ್ರಧಾನಿ ಮೋದಿಯವರ ಬಲೆಗೆ ಬೀಳಬೇಡಿ ಎಂದರು.
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ಖರ್ಗೆ ಅವರು ಈ ಹೇಳಿಕೆ ನೀಡಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಕಾರಣವಾದ ಕಾಂಗ್ರೆಸ್ ನ ಬೂತ್ ಮಟ್ಟದ ಏಜೆಂಟರಿಗೆ ನಾನು ಧನ್ಯವಾದ ಹೇಳುತ್ತೇನೆ.ಈಗ 2024ರ ಲೋಕಸಭೆ ಚುನಾವಣೆಯಲ್ಲೂ ನೀವು ಮನೆ ಮನೆಗೆ ತೆರಳಿ ಸಂಪೂರ್ಣ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು.ನೀವೆಲ್ಲರೂ ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ನೋಡಿರಬೇಕು “ಮೋದಿ ಗ್ಯಾರಂಟಿ”. ನಾವು ಮೊದಲು ಅವರ ಹಳೆಯ ಗ್ಯಾರಂಟಿ ಬಗ್ಗೆ ಕೇಳಲು ಬಯಸುತ್ತೇವೆ. ವಾರ್ಷಿಕವಾಗಿ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆಯೇ?, ಹಣದುಬ್ಬರ ಕಡಿಮೆಯಾಗಿದೆಯೇ?, ಕಪ್ಪು ಹಣ ವಾಪಸ್ ಬಂದಿದೆಯೇ? ಎಂದು ಪ್ರಶ್ನಿಸಿದರು.