ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಯ ನಂತರ ದೇಶವನ್ನು ತೊರೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಶೇಖ್ ಹಸೀನಾ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲು ಬಾಂಗ್ಲಾದೇಶ ನ್ಯಾಯಾಲಯ ಗುರುವಾರ ಆದೇಶಿಸಿದೆ.
ಕಳೆದ ಆಗಸ್ಟ್‌ನಲ್ಲಿ ಅಧಿಕಾರದಿಂದ ವಜಾಗೊಂಡ ನಂತರ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು. ಇದೀಗ ‘ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಂಧಿಸಿ ನವೆಂಬರ್ 18ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ’ ಎಂದು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್‌ನ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಾಜುಲ್ ಇಸ್ಲಾಂ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಬಾಂಗ್ಲಾದೇಶದ ಈ ಕ್ರಮದಿಂದ ಶೇಖ್ ಹಸೀನಾಗೆ ಮತ್ತಷ್ಟು ಸಮಸ್ಯೆಗಳು ಎದುರಾಗಿದ್ದು, ಬಂಧನ ವಾರಂಟ್ ಜಾರಿ ಮಾಡಿರುವುದರಿಂದ ಅನಿವಾರ್ಯವಾಗಿ ಬಾಂಗ್ಲಾದೇಶಕ್ಕೆ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ. ಬಾಂಗ್ಲಾ ದೇಶದಲ್ಲಿ ನಡೆದ ವಿದ್ಯಾರ್ಥಿ ಚಳವಳಿಯ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಹತ್ಯಾಕಾಂಡಕ್ಕಾಗಿ ನ್ಯಾಯಮಂಡಳಿ ಶೇಖ್ ಹಸೀನಾ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ನವೆಂಬರ್ 18ರಂದು ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ.
ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಹತ್ಯೆಗಳಲ್ಲಿ ಭಾಗಿಯಾಗಿರುವ ಇತರ 50 ಜನರಿಗೆ ಸಹ ಬಂಧನ ವಾರಂಟ್‌ಗಳನ್ನು ನೀಡಿ ಪ್ರಾಸಿಕ್ಯೂಷನ್ ಸೂಚಿಸಿದೆ. ದೇಶಭ್ರಷ್ಟ ನಾಯಕಿ ಮತ್ತು ಅವರ ಅವಾಮಿ ಲೀಗ್ ಸಹಚರರ ವಿರುದ್ಧ ಬಲವಂತದ ನಾಪತ್ತೆ, ಕೊಲೆ ಮತ್ತು ಸಾಮೂಹಿಕ ಹತ್ಯೆಗಳ 60 ದೂರುಗಳನ್ನು ನ್ಯಾಯಮಂಡಳಿ ಇದುವರೆಗೆ ಸ್ವೀಕರಿಸಿದೆ.
ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಮೊಹಮ್ಮದ್ ಗುಲಾಮ್ ಮುರ್ತುಜಾ ಮಜುಂದಾರ್ ಅವರು ನ್ಯಾಯಾಧಿಕರಣದ ವಿಚಾರಣೆಯನ್ನು ಪ್ರಾರಂಭಿಸಿದರು. ಮೊದಲ ದಿನ, ಪ್ರಾಸಿಕ್ಯೂಷನ್ ತಂಡವು ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ 50 ಜನರ ವಿರುದ್ಧ ಬಂಧನ ವಾರಂಟ್‌ಗೆ ಒತ್ತಾಯಿಸಿತು. ಅವಾಮಿ ಲೀಗ್ ಪಕ್ಷದ ನಾಯಕಿ ಶೇಖ್ ಹಸೀನಾ, 14-ಪಕ್ಷಗಳ ಮೈತ್ರಿಕೂಟದ ಇತರ ನಾಯಕರು, ಮಾಜಿ ಕಾನೂನು ಜಾರಿ ಅಧಿಕಾರಿಗಳು ಮತ್ತು ದೇಶದ ಪತ್ರಕರ್ತರ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್‌ನಲ್ಲಿ ಬಲವಂತದ ನಾಪತ್ತೆ ಮತ್ತು ಕೊಲೆಗೆ ಸಂಬಂಧಿಸಿದ 60 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.