ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರ ಮೇಲೆ ಸರ್ಕಾರ ಮತ್ತು ಉದ್ಯೋಗಿಗಳಿಗೆ ವಂಚನೆ ಮಾಡಿದ ಆರೋಪದಡಿ ಬಂಧನ ವಾರೆಂಟ್ ಜಾರಿಯಾಗಿದೆ. ಉತ್ತಪ್ಪ ಅವರು ನಡೆಸುತ್ತಿದ್ದ ಕಂಪನಿಯ ಉದ್ಯೋಗಿಗಳ ಪಿಎಫ್ ಹಣವನ್ನು ಪಾವತಿಸದೆ 23 ಲಕ್ಷ ರೂ. ವಂಚಿಸಿದ್ದಾರೆ ಎನ್ನಲಾಗಿದೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ರಾಬಿನ್ ಉತ್ತಪ್ಪ ಅವರ ಮೇಲೆ ಸರ್ಕಾರಕ್ಕೆ ಹಾಗೂ ಉದ್ಯೋಗಿಗಳಿಗೆ ವಂಚನೆ ಮಾಡಿದ ಆರೋಪದಡಿ ಅವರನ್ನು ಬಂಧಿಸಲು ವಾರೆಂಟ್ ಜಾರಿಯಾಗಿದೆ. ಈಗಾಗಲೇ ಪಿಂಚಣಿ ಯೋಜನೆ ಕಚೇರಿಯ ಅಧಿಕಾರಿಗಳು ಆರೆಸ್ಟ್ ವಾರೆಂಟ್ ಜಾರಿ ಮಾಡಿ ಎಂದು ಇಲ್ಲಿನ ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಾರೆ.
ಪಿಎಫ್‌ಓ ಪ್ರಾದೇಶಿಕ ಕಮಿಷನರ್ ಷಡಾಕ್ಷರಿ ಗೋಪಾಲ ರೆಡ್ಡಿ ಅವರು ಉತ್ತಪ್ಪ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಪತ್ರ ಬರೆದಿರುವುದು ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಸೆಂಚುರಿಸ್ ಲೈಫ್ ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್ ಎನ್ನುವ ಖಾಸಗಿ ಕಂಪನಿಯನ್ನು ನಡೆಸುತ್ತಿದ್ದರು. ಇದೀಗ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಪಿಎಫ್ ಹಣವನ್ನು ಪಾವತಿಸದೇ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಉತ್ತಪ್ಪ ಅವರ ಮೇಲಿದೆ.