ಕೆಎಸ್ಆರ್ಟಿಸಿ ಹಾಗೂ ಇತರ ಮೂರು ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಏರಿಕೆ ಇಂದು ಮಧ್ಯರಾತ್ರಿಯಿಂದಲೇ ಅನ್ವಯವಾಗಲಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರ ಶನಿವಾರ ಮಾಧ್ಯಾಹ್ನ ಅಧಿಕೃತ ಆದೇಶ ಹೊರಡಿಸಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿ ಬಸ್ ಟಿಕೆಟ್ ದರ ಶೇ 15ರಷ್ಟು ಹೆಚ್ಚಳವಾಗಲಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2015ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ 2020ರಲ್ಲಿ ಪ್ರಯಾಣದ ದರ ಪರಿಷ್ಕರಣೆ ಮಾಡಲಾಗಿರುತ್ತದೆ. ಪ್ರಯಾಣ ದರ ಪರಿಷ್ಕರಣೆಗಾಗಿ ನಿಗಮದ ಸಿಬ್ಬಂದಿ ವೇತನ ವೆಚ್ಚ, ಇಂಧನ ವೆಚ್ಚ ಹಾಗೂ ನಿರ್ವಹಣಾ ವೆಚ್ಚವನ್ನು ಪರಿಗಣಿಸಲಾಗುತ್ತಿದೆ. ಪ್ರಸ್ತುತ 9.56 ಕೋಟಿ ರೂ. ಮೊತ್ತವನ್ನು ಹೆಚ್ಚುವರಿಯಾಗಿ ವೆಚ್ಚ ಮಾಡುತ್ತಿದ್ದು, ಸಿಬ್ಬಂದಿ ವೆಚ್ಚ ಸೇರಿ ವಾರ್ಷಿಕವಾಗಿ 3650.00 ಕೋಟಿ ರೂ. ನಿಗಮಕ್ಕೆ ಹೊರೆಯಾಗುತ್ತಿದೆ. ಆದ್ದರಿಂದ, ಶೇ 15ರಷ್ಟು ಪ್ರಯಾಣದ ದರ ಹೆಚ್ಚಳ ಮಾಡಲು ಸಭೆಯು ನಿರ್ಣಯಿಸಿ, ಅದರಂತೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇವರು ಕರ್ನಾಟಕ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕ.ರಾ.ರ.ಸಾ.ನಿಗಮ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬೆಂ.ಮ.ಸಾ.ಸಂಸ್ಥೆ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂಸ್ಥೆ) ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ (ಕ.ಕ.ರ.ಸಾ.ನಿಗಮ) ಸುಮಾರು 25337 ಬಸ್‌ಗಳಿಂದ ಪ್ರತಿದಿನ ಸುಮಾರು 23038 ಟ್ರಿಪ್ಗಳನ್ನು ಕಾರ್ಯಾಚರಿಸಲಾಗುತ್ತಿದೆ. ಅದರಂತೆ, ಪ್ರತಿದಿನ ಸರಾಸರಿ 116.18ಲಕ್ಷ ಪ್ರಯಾಣಿಕರು ನಾಲ್ಕು ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ. ಶಕ್ತಿ ಯೋಜನೆಯ ಅನುಷ್ಠಾನದ ನಂತರ ರಾಜ್ಯದಲ್ಲಿ ಸುಮಾರು 64 ಲಕ್ಷ ಮಹಿಳಾ ಪ್ರಯಾಣಿಕರು ಆಯ್ದ ಟ್ರಿಪ್ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ನಾಲ್ಕು ನಿಗಮಗಳು ಸುಮಾರು 1,01,648 ಸಿಬ್ಬಂದಿಗಳನ್ನು ಹೊಂದಿದ್ದು, ಆಯಾ ನಿಗಮಗಳು ಸದರಿ ಸಿಬ್ಬಂದಿಗಳ ಸಂಬಳ ಮತ್ತು ಎಲ್ಲಾ ಭತ್ಯೆಗಳನ್ನು ನಿಗಮಗಳ ಆದಾಯದ ಮೂಲಕ ಮಾತ್ರ ವಾವತಿಸುತ್ತಿವೆ. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ 2024-25ನೇ ಆರ್ಥಿಕ ವರ್ಷದ 1ನೇ ಏಪ್ರಿಲ್‌ನಿಂದ 30ನೇ ನವೆಂಬರ್‌ವರೆಗೆ ಒಟ್ಟು ಆದಾಯ ರೂ.8418.46 ಕೋಟಿಗಳಾಗಿದ್ದು, ನಾಲ್ಕು ಸಾರಿಗೆ ಸಂಸ್ಥೆಗಳು ಒಟ್ಟು 9511.41 ಕೋಟಿ ರೂ.ಗಳ ವೆಚ್ಚವನ್ನು ಮಾಡಿರುತ್ತವೆ. ಪ್ರಸ್ತುತ 2024-25ನೇ ಆರ್ಥಿಕ ವರ್ಷದಲ್ಲಿ (ನವೆಂಬರ್‌ವರೆಗೆ) ನಿಮ್ಮಳ ಕೊರತೆಯು 1092.95 ಕೋಟಿ ರೂ.ಗಳಷ್ಟಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ಇನ್ನಿತರ ಅಂಶಗಳನ್ನೂ ನಮೂದಿಸಲಾಗಿದೆ.