ಬಸ್‌‍ ಟಿಕೆಟ್‌ ದರ ಪರಿಷ್ಕರಣೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ರಾಜ್ಯ ಸರ್ಕಾರ, ತಿಂಗಳಾತ್ಯಕ್ಕೆ ನೀರಿನ ದರವನ್ನೂ ಹೆಚ್ಚಿಸಲು ಮುಂದಾಗಿರುವ ಬೆನ್ನಲ್ಲೇ ಇದೀಗ ಹಾಲಿನ ದರವನ್ನು ಶೀಘ್ರದಲ್ಲೇ ಹೆಚ್ಚಳ ಮಾಡುವ ಮೂಲಕ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಭಾಗ್ಯ ನೀಡಲು ಮುಂದಾಗಿದೆ.

ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಂಡಳಿಯು (ಕೆಎಂಎಫ್‌) ಪ್ರತಿ ಲೀಟರ್‌ ಹಾಲಿನ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಇದಕ್ಕೆ ಅನುಮೋದನೆ ನೀಡಿದರೆ ಹೊಸವರ್ಷಕ್ಕೆ ಗ್ರಾಹಕರಿಗೆ ಬೆಲೆ ಏರಿಕೆ ಬರೆ ಬೀಳಲಿದೆ.

ಹಾಲಿನ ದರ ಪರಿಷ್ಕರಣೆಯಿಂದ ಜನರಿಗೆ ಮತ್ತೆ ಆರ್ಥಿಕ ಹೊರೆಯಾಗಲಿದೆ. ಈ ಸಂಬಂಧ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈ ಹಿಂದೆಯು ಹಾಲಿನ ಬೆಲೆ ಪರಿಷ್ಕರಣೆ ಮಾಡಲಾಗಿತ್ತು. ಆಗ 50 ಎಂಎಲ್‌ ಹೆಚ್ಚುವರಿ ಹಾಲು ಒದಗಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಸಬೂಬು ನೀಡಿತ್ತು. ಆಗಲೂ ಸಹ ಸಾರ್ವಜನಿಕರು ದರ ಏರಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಈ ಮಧ್ಯೆ ಹೈನುಗಾರರಿಗೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ ಧನವು ಸಿಗದೇ ಅವರ ಜೀವನ ಸಂಕಷ್ಟದಲ್ಲಿ ಕಳೆಯುವಂತಾಗಿದೆ.

ಹಾಲಿನ ದರ ಏರಿಕೆ ಪ್ರಸ್ತಾಪ ಇರುವುದು ಸತ್ಯ ಎಂದು ಸಚಿವರು ಒಪ್ಪಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಗ್ರೀನ್‌ ಸಿಗ್ನಲ್‌ ಕೊಟ್ಟರೆ ಶೀಘ್ರವೇ ಹಾಲಿನ ದರ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.

ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ರೈತರ ಒತ್ತಾಯ ಇದೆ. ಏಕೆಂದರೆ ರೈತರು ಜಾನುವಾರುಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಹಾಲಿನ ದರ 10 ರೂ. ಏರಿಕೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ನಾವಿನ್ನೂ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಬಳಿಕ ಅಂತಿಮ ತೀರ್ಮಾನ ಮಾಡುತ್ತೇವೆ.

ರೈತರು ಹಾಲಿನ ಮೇಲೆ ಅವಲಂಬಿತರಾಗಿದ್ದಾರೆ. ದಿನೇ ದಿನೇ ಹಾಲಿನ ಉತ್ಪಾದನೆ ವೆಚ್ಚ ಹೆಚ್ಚಳ ಆಗುತ್ತಿದೆ. ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. 5 ರೂ, 3 ರೂ, 10 ರೂ. ಮಾಡುತ್ತೇವೋ ಅದು ಇನ್ನೂ ತೀರ್ಮಾನ ಆಗಿಲ್ಲ ಎನ್ನುವ ಮೂಲಕ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌ ದರ ಹೆಚ್ಚಳದ ಸುಳಿವು ನೀಡಿದ್ದಾರೆ.

Leave a Reply

Your email address will not be published. Required fields are marked *