ನೆರೆಯ ಚೀನಾ ದೇಶದಲ್ಲಿ ಎಚ್‌ಎಂಪಿವಿ ಸೋಂಕು ಆರ್ಭಟಿಸುತ್ತಿರುವ ಬೆನ್ನಲ್ಲೆ ಬೆಂಗಳೂರು ನಗರದಲ್ಲಿ ದೇಶದಲ್ಲೇ ಇದೇ ಮೊದಲ ಬಾರಿಗೆ 8 ತಿಂಗಳ ಹಾಗೂ 3 ತಿಂಗಳ ಮಗುವಿನಲ್ಲಿ ವೈರಸ್ ಕಾಣಿಸಿಕೊಂಡಿರುವುದು ಆತಂಕಕ್ಕೆಡೆ ಮಾಡಿಕೊಟ್ಟಿದೆ.

ಎಂಟು ತಿಂಗಳ ಮಗು ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ರಕ್ತ ಪರೀಕ್ಷೆ ವೇಳೆ ಎಚ್‌ಎಂಪಿವಿ ವೈರಸ್ ಇರುವುದು ಪತ್ತೆಯಾಗಿದೆ.

ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ 3 ತಿಂಗಳ ಹೆಣ್ಣು ಶಿಶುವಿಗೆ ಎಚ್‌ಎಂಪಿವಿ ವೈರಸ್ ಇರುವುದು ದೃಢಪಟ್ಟಿದೆ. ಆದರೆ, ಈ ಶಿಶುವನ್ನು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಚ್‌ಎಂಪಿವಿ ವೈರಸ್ ಭಾರತದಲ್ಲೂ ಇದೆ. ಆದರೆ, ಅದು ಮ್ಯುಟೇಷನ್ ಆಗಿರುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಚೀನಾದಲ್ಲಿ ಮ್ಯುಟೇಟ್ ಆಗಿರುವ ವೈರಸ್ ಯಾವ ರೀತಿಯಲ್ಲಿದೆ ಎಂಬುದೂ ಕೂಡ ತಿಳಿದು ಬಂದಿಲ್ಲ. ಬೆಂಗಳೂರಿನಲ್ಲಿ ಪತ್ತೆಯಾಗಿರುವುದು ಸಾಮಾನ್ಯ ವೈರಸ್ಸೇ ಅಥವಾ ಚೀನಾದ ಥಳಿಯ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಸಾಮಾನ್ಯ ಎಚ್‌ಎಂಪಿವಿ ವೈರಸ್ ಶೇ.0.78ರಷ್ಟು ಕಾಣಿಸುತ್ತಿದೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ತಿಳಿಸಿದ್ದಾರೆ.

ವೈರಸ್ ಪತ್ತೆಯಾಗಿರುವ ಮಗುವಿಗೆ ಮತ್ತು ಕುಟುಂಬದವರಿಗೆ ಪ್ರಯಾಣ ಮಾಡಿರುವ ಇತಿಹಾಸವಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈ ವೈರಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸುತ್ತಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *