ಮುಂಬೈ : ಮಹಾರಾಷ್ಟ್ರ ಭೀಕರ ಬಸ್ ಅಪಘಾತ ಪ್ರಕರಣಕ್ಕೆ ಸಂಬಂಸಿದಂತೆ ಮೃತರ ಕುಟುಂಬಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ತಲಾ ರೂ.5 ಲಕ್ಷ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಲಾ ರೂ.2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ದುರ್ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು, ಬುಲ್ಧಾನ ಜಿಲ್ಲೆಯ ಸಿಂಧಖೇದರಾಜ ಬಳಿಯ ಸಮೃದ್ಧಿ ಹೆದ್ದಾರಿಯಲ್ಲಿ ಖಾಸಗಿ ಬಸ್‍ನ ಭೀಕರ ಅಪಘಾತದ ಅತ್ಯಂತ ದುಃಖವನ್ನು ತಂದಿದ್ದು, ಮೃತರ ಕುಟುಂಬಕ್ಕೆ ತೀವ್ರ ಸಂತಾಪವನ್ನು ಸೂಚಿಸುತ್ತೇನೆ.
ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಯಿಂದ ತಲಾ 5 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೆ, ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ಮಹಾರಾಷ್ಟ್ರದ ಬುಲ್ಧಾನದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತ ತೀವ್ರ ದುಃಖ ತಂದಿದೆ. ಅಪಘಾತದಲ್ಲಿ ಮೃತಪಟ್ಟವರಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರಗತಿಯಲ್ಲಿ ಚೇತರಿಸಿಕೊಳ್ಳಲಿ. ಗಾಯಾಳುಗಳಿಗೆ ಸ್ಥಳೀಯ ಆಡಳಿತ ಮಂಡಳಿ ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿದೆ. ಮೃತರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಯಿಂದ (ಪಿಎಂಎನ್‍ಆರ್‍ಎಫ್) ರೂ.2 ಲಕ್ಷ ಹಾಗೂ ಗಾಯಾಳುಗಳಿಗೆ ರೂ.50,000 ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿ, ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತ ಹೃದಯವಿದ್ರಾವಕ ಘಟನೆಯಾಗಿದೆ. ಈ ದುಃಖದ ಸಮಯದಲ್ಲಿ, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳಿಗೆ ಆಡಳಿತ ಮಂಡಳಿಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.