ಮೈಸೂರು : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಎರಡನೇ‌ ಟೋಲ್ ಸಂಗ್ರಹ ಕೇಂದ್ರ ಸರ್ಕಾರದ ಉದ್ಧಟತನವಾಗಿದೆ. ಜನರಿಗೆ ಟೋಲ್ ಕಟ್ಟದಂತೆ ಕರೆ ನೀಡಲಾಗಿದೆ. ಟೋಲ್ ಸಂಗ್ರಹ ವಿರೋಧಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನೇರವಾಗಿ ಪ್ರತಿಭಟನೆಗೆ ಹೋಗುವುದಿಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಟೋಲ್ ಸಮಸ್ಯೆಯ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತರಲಾಗಿದೆ. ಈ ಸಂಬಂಧ ನಮ್ಮ ಶಾಸಕರು ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.

ಅಭಿವೃದ್ದಿ ಕಾರ್ಯಗಳಿಗೆ ಕೇಂದ್ರ ಸರ್ಕಾರ ಎಲ್ಲಿಂದಲೋ ಹಣ ತರುವುದಿಲ್ಲ. ರಾಜ್ಯ ಸರ್ಕಾರಗಳು ಕಟ್ಟುವ ತೆರಿಗೆಯಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತದೆ. ಹೀಗಿದ್ದರೂ ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಾಮಗಾರಿ ಪೂರ್ಣವಾಗದೇ ಟೋಲ್ ಸಂಗ್ರಹ ಮಾಡುವುದು ಬೇಡ ಅಂತ ಹೇಳಿದ್ದೇವೆ. ಹೈವೇಯಲ್ಲಿ ಅಪಘಾತಗಳು ಹೆಚ್ಚುತ್ತಿರುವುದರಿಂದ ಎಡಿಜಿಪಿ ಅಲೋಕ್​ಕುಮಾರ್ ಸ್ಥಳ ಪರಿಶೀಲನೆ ಮಾಡಿದ್ದಾರೆ. ಎಲ್ಲ ಸಮಸ್ಯೆಗಳನ್ನು ಸರಿ ಮಾಡಿಕೊಂಡು ಟೋಲ್ ಸಂಗ್ರಹಿಸಿದರೆ ನಮ್ಮ ಅಡ್ಡಿ ಇಲ್ಲ. ಶೀರ್ಘದಲ್ಲೇ ಇದಕ್ಕೊಂದು ರೆಮಿಡಿ ಕಂಡು ಹಿಡಿಯುತ್ತೇವೆ ಎಂದರು.

ಕಾಂಗ್ರೆಸ್-ಬಿಜೆಪಿ ನಡುವೆ ಪಂಚೆ ರಾಜಕೀಯ ಮುನ್ನೆಲೆಗೆ ಬಂದಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೊದಲು ಸಿ.ಟಿ. ರವಿ ತಮ್ಮ ಪಂಚೆ ಸರಿ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು. ಚುನಾವಣೆಯಲ್ಲಿ ಈ ರೀತಿ ಮಾತನಾಡಿದ್ದಕ್ಕೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ಉತ್ತರವೇ ಅಂತಿಮ. 65 ಸ್ಥಾನಕ್ಕೆ ಕುಸಿದಿರುವ ಅವರಲ್ಲಿ ಕಚ್ಚಾಟ ಇಲ್ವಾ. ನಮ್ಮಲ್ಲಿ ಡಿಕೆಶಿ, ಸಿದ್ದರಾಮಯ್ಯ ಏನು ಕಿತ್ತಾಡುತ್ತಿದ್ದಾರಾ? ಸುಮ್ಮನೇ ಅವರೇ ಕಲ್ಪಿಸಿಕೊಂಡು ಮಾತಾನಾಡುತ್ತಾರೆ. ಮನಸ್ಸಿಗೆ ಬಂದಂತೆ ಮಾತನಾಡಿದವರನ್ನು ಜನರು ಮಲಗಿಸಿದ್ದಾರೆ.‌ ಅದರಲ್ಲಿ ಒಬ್ಬರು ಇಬ್ಬರು ಉಳಿದುಕೊಂಡಿದ್ದಾರೆ. ಜನ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ನಮ್ಮ ಪಂಚೆ ಸರಿ ಮಾಡೋದು ಬೇಡ. ಮೊದಲು ಅವರ ಪಂಚೆ ಸರಿ ಮಾಡಿಕೊಳ್ಳೋಕೆ ಹೇಳಿ ಎಂದರು.

Leave a Reply

Your email address will not be published. Required fields are marked *